ಗ್ಲ್ಯಾಡಿಯೋಲಸ್ 

  ಇರಿಡೇಸೀ ಕಟುಂಬಕ್ಕೆ ಸೇರಿದ ಒಂದು ಬಹು ವಾರ್ಷಿಕ ಲಶುನ ಸಸ್ಯ ಜಾತಿ. ಬಲು ಸುಂದರವಾದ ಹೂಗಳನ್ನು ಬಿಡುವುದರಿಂದ ಇದನ್ನು ಅಲಂಕಾರಕ್ಕಾಗಿ ಬೆಳೆಸುತ್ತಾರೆ.  ದಕ್ಷಿಣ ಅಮೆರಿಕ ಇದರ ತವರು.  ಇದರಲ್ಲಿ ಸುಮಾರು 160 ಪ್ರಭೇದಗಳಿವೆ.  ಇವುಗಳಲ್ಲಿ ಬಹುಪಾಲು ಬಗೆಗಳು ದಕ್ಷಿಣ ಆಫ್ರಿಕದ ಮೂಲವಾಸಿಗಳು.  ಉಳಿದವುಗಳ ತವರು ಮೆಡಿಟರೇನಿಯನ್ ಪ್ರದೇಶ ಇಲ್ಲವೆ ಏಷ್ಯದ ಪಶ್ಚಿಮ ಭಾಗ.

ಎಲ್ಲ ಪ್ರಭೇದಗಳೂ ಮೂಲಿಕೆ ಬಗೆಯವು.  ಕಾಂಡ ಕಂದುಗಡ್ಡೆ (ಕಾರ್ಮ್) ರೀತಿಯದು.  ಪ್ರತಿವರ್ಷ ಹಳೆಯ ಕಾಂಡ ಸತ್ತುಹೋಗಿ ಅದರ ಮೇಲ್ತುದಿಯಲ್ಲಿ ಹೊಸಕಾಂಡ ಹುಟ್ಟಿಕೊಳ್ಳುತ್ತದೆ.  ಜೊತೆಗೆ ಕಾಂಡದ ಬುಡದಿಂದ ಕೆಲವು ಮರಿ ಗೆಡ್ಡೆಗಳೂ ಹುಟ್ಟುತ್ತವೆ.  ಎಲೆಗಳು ಕತ್ತಿಯಾಕಾರದುವು.  ಹೂಗಳು ಸರಳವಾದ ಇಲ್ಲವೇ ಕವಲೊಡೆದ ಕದಿರುಗೊಂಚಲುಗಳಲ್ಲಿ ಜೋಡಣೆಗೊಂಡಿವೆ.  ಹೂಗಳು ದೊಡ್ಡ ಗಾತ್ರದವು.   ಇವುಗಳ ಆಕಾರ ಆಲಿಕೆಯಂತೆ.  ಹೂಗಳು ಕೆಂಪು, ಕೆನ್ನೀಲಿ, ಹಳದಿ, ಬಿಳಿ ಮುಂತಾಗಿ ವರ್ಣವೈವಿಧ್ಯವನ್ನು ತೋರುವುದರಿಂದ ಬಲು ಸುಂದರವಾಗಿ ಕಾಣುತ್ತವೆ.  ಪ್ರತಿಹೂವಿನಲ್ಲಿ 6 ಪೆರಿಯಾಂತ್ ಹಾಲೆಗಳು, 3 ಕೇಸರಗಳು, ಮೂರು ಕಾರ್ಪೆಲುಗಳನ್ನೊಳಗೊಂಡ ನೀಚಸ್ಥಾನದ ಅಂಡಾಶಯ ಇವೆ.  ಕಾಯಿ ಸಂಪುಟ ಮಾದರಿಯದು.  ಬೀಜಗಳು ಚಪ್ಪಟೆಯಾಗಿರಬಹುದು ಇಲ್ಲವೆ ಗುಂಡಗಿರಬಹುದು.  ಉದ್ಯಾನಗಳಲ್ಲಿ ಬೆಳಸಲಾಗುವ ಪ್ರಭೇದಗಳಲ್ಲಿ ಏಲೇಟಸ್, ಗ್ರ್ಯಾಂಡಿಸ್, ಟ್ರಸ್ಟಿಸ್, ಬೈಫ್ಲೋರಸ್, ಕಾರ್ಡಿನ್ಯಾಲಿಸ್, ಪ್ರಿಮ್ಯುಲೈನಸ್, ಬ್ಲಾಂಡಸ್, ಫ್ಲಾರಿಬಂಡಸ್, ಕಾಲ್‍ವಿಲೈ, ಗಾಂಡವೆನ್ಸಿಸ್, ಲೆಮಾಯನೈ, ನಾನ್‍ಸೈಯೇನಸ್‍ಗಳು ಬಹಳ ಮುಖ್ಯವಾದವು.  ಇವುಗಳಲ್ಲಿ ಕೊನೆಯ ನಾಲ್ಕು ಬಗೆಗಳು ಮಿಶ್ರತಳಿಗಳು.  

ಗ್ಲ್ಯಾಡಿಯೋಲಸನ್ನು ಮರಿಗೆಡ್ಡೆಗಳಿಂದ ಇಲ್ಲವೆ ಬೀಜಗಳಿಂದ ವೃದ್ಧಿಸಬಹುದು.  ನೀರು ಸರಾಗವಾಗಿ ಬಸಿದುಹೋಗುವಂಥ ಯಾವ ಬಗೆಯ ಮಣ್ಣಿನಲ್ಲಾದರೂ ಇದರ ಬೆಳವಣಿಗೆ ಹುಲುಸು.  ಮೈದಾನ ಸೀಮೆಗಳಲ್ಲಿ ಸೆಪ್ಟೆಂಬರ್ - ಅಕ್ಟೋಬರ್ ತಿಂಗಳುಗಳಲ್ಲೂ ಬೆಟ್ಟ ಪ್ರದೇಶಗಳಲ್ಲಿ ಮಾರ್ಚ್ - ಏಪ್ರಿಲ್ ತಿಂಗಳುಗಳಲ್ಲೂ ಗೆಡ್ಡೆಗಳನ್ನು ನೆಡಲಾಗುತ್ತದೆ.  ನೆಲದಲ್ಲಿ ನೆಡುವ ಮುನ್ನ ಗೆಡ್ಡೆಗಳ ಮೇಲಿನ ಕಂದು ಬಣ್ಣದ ಹುರುಪೆಲೆಯ್ನು ತೆಗೆದುಹಾಕಿ, ಅಗಲವಾದ ತಟ್ಟೆಗಳನ್ನಿಟ್ಟು ಬೆಚ್ಚಗಿನ, ಕತ್ತಲೆಕೋಣೆಗಳಲ್ಲಿ ಕೊಂಚದಿನ ಇಡಬೇಕು.  ಇದರಿಂದ ಗೆಡ್ಡೆಗಳು ಮೊಳಕೆಯೊಡೆಯುತ್ತವೆ.  ಅನಂತರ ಅಪೇಕ್ಷಿತ ಸ್ಥಳಕ್ಕೆ ವರ್ಗಾಯಿಸಬೇಕು.  ಸಾಕಷ್ಟು ಪರಿಮಾಣದಲ್ಲಿ ಕುದುರೆ ಗೊಬ್ಬರ, ಕಾಂಪೋಸ್ಟ್ ಗೊಬ್ಬರ, ಹೊಂಗೆ ಇಲ್ಲವೆ ಹುಚ್ಚೆಳ್ಳಿನ ಹಿಂಡಿಯನ್ನು ಹಾಕುತ್ತಿದ್ದು ಚೆನ್ನಾಗಿ ನೀರು ಹಾಯಿಸುತ್ತಿದ್ದರೆ ಗಿಡಗಳು ಹುಲುಸಾಗಿ ಬೆಳೆದು ಎರಡು ತಿಂಗಳ ಅನಂತರ ಹೂ ಬಿಡಲು ಆರಂಭಿಸುತ್ತವೆ.  ಹೂ ಅರಳುವ ಅವಧಿÀಯೂ ಸುಮಾರು ಎರಡು ತಿಂಗಳುಗಳು.  ಹೂ ಬಿಡುವ ಕಾಲ ಮುಗಿಯುತ್ತ ಬಂದಾಗ, ಗಿಡಗಳು ಬಾಗಿ ಕಂದು ಬಣ್ಣಕ್ಕೆ ತಿರುಗುತ್ತದೆ.  ಆಗ ಗಿಡಗಳಿಗೆ ನೀರು ಕಟ್ಟುವುದನ್ನು ನಿಲ್ಲಿಸಬೇಕು.  ಎರಡು ವಾರಗಳ ಅನಂತರ ಮರಿಗೆಡ್ಡೆಗಳನ್ನು ಅಗೆದು ತಂಪಾದ ಮತ್ತು ಶುಷ್ಕವಾದ ಮರಳಿನ ಗೆಡ್ಡೆಗಳಲ್ಲಿ ಶೇಖರಿಸಿಡಬಢಕು. ಗೆಡ್ಡೆಗಳು ಹೆಚ್ಚು ಚಳಿಯನ್ನು ತಡೆಯುವುದಿಲ್ಲವಾದ್ದರಿಂದ ಅವು ಹೆಚ್ಚು ಚಳಿಗೆ ಸಿಗದಂತೆ ನೋಡಿಕೊಳ್ಳಬೇಕು. 				  							  (ಎಂ.ಎಚ್.ಎಂ.;ಎನ್.ಎಸ್.ಐ.)
(ಪಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ